- ಛಾಯಾ ಎಂ. ಎಸ್.
ಲೇಖನದ ಕುರಿತು - ಈ ಸಣ್ಣ ಲೇಖನದಲ್ಲಿ ಜನವರಿ 26, 2026 ರಿಂದ ಜನವರಿ 31, 2026ರವರೆಗೆ ಛಾಯಾರವರು IIT ಧಾರವಾಡದಲ್ಲಿ ಭಾಗವಹಿಸಿದ್ದ MTTS ಕ್ಯಾಂಪಿನ ಅನುಭವಗಳನ್ನು ಸಂಕ್ಷಿಪ್ತವಾಗಿ ಹಂಚಿಕೊಂಡಿದ್ದಾರೆ.
“ಗಣಿತವೆಂದರೆ ಕೆಲವು ನಿಯಮಗಳ ಪ್ರಕಾರ ಕಾಗದದ ಮೇಲೆ ಅರ್ಥವಿಲ್ಲದ ಚಿಹ್ನೆಗಳೊಟ್ಟಿಗೆ ಆಡುವ ಆಟ.” — ಡೇವಿಡ್ ಹಿಲ್ಬರ್ಟ್
ಜನವರಿ 26ರಿಂದ 31ರವರೆಗೆ, ಐಐಟಿ ಧಾರವಾಡ್ನಲ್ಲಿ ನಡೆದ MTTS (Mathematics Training and Talent Search) ಶಿಬಿರದಲ್ಲಿ ಭಾಗವಹಿಸುವ ಅದ್ಭುತ ಅವಕಾಶ ನನಗೆ ದೊರಕಿತು. ಮೈಸೂರಿನಿಂದ ನನ್ನ ಪ್ರಯಾಣ ಆರಂಭವಾದದ್ದು ಜನವರಿ 25ರಂದು. ಫೆಬ್ರವರಿ 1ರಂದು ಮರಳಿ ಹಿಂದುರಿಗಿದಾಗ, ಕೇವಲ ಕೆಲ ಹೊಸ ಟಿಪ್ಪಣಿ, ಜ್ಞಾನ್ನವನ್ನಷ್ಟೇ ಅಲ್ಲದೇ, ಗಣಿತದ ಕುರಿತು ಹೊಸ ದೃಷ್ಟಿಕೋನವನ್ನೇ ಹೊತ್ತುಬಂದಿದ್ದೆ.
ಈ ಅಮೂಲ್ಯ ಅನುಭವದ ಎಳ್ಳಷ್ಟೂ ಅರಿವಿಲ್ಲದ ನಾನು ಸರಳವಾಗಿ ಒಂದು ಅರ್ಜಿ ಸಲ್ಲಿಸಿ ಈ ಶಿಬಿರಕ್ಕೆ ಆಯ್ಕೆಯಾಗಿದ್ದೆ. ಈ ಶಿಬಿರವು ಗಣಿತದ ಮೂಲಭೂತ ಅಂಶಗಳ ಮೇಲೆ ಕೇಂದ್ರೀಕೃತವಾಗಿದ್ದು, ವಿಷಯದ ಮೇಲೆ ಮರು ಪ್ರೀತಿಯನ್ನು ಹುಟ್ಟಿಸುವಂತಹ ಹೊಸ ಬೋಧನಾ ವಿಧಾನವನ್ನು ಪರಿಚಯಿಸಿತು. ಇಲ್ಲಿಗೆ ಬರುವ ಬೋಧಕರು ದೇಶದ ವಿವಿಧ ಪ್ರತಿಷ್ಠಿತ ಸಂಸ್ಥೆಗಳಲ್ಲಿ (ಉದಾಹರಣೆಗೆ – ಐಐಟಿ) ಕಾರ್ಯನಿರ್ವಹಿಸುತ್ತಿರುವವರು ಎನ್ನುವುದು ಒಂದಾದರೆ, ಗಣಿತದ ಬೋಧನೆಯ ಬಗ್ಗೆ ಹೆಚ್ಚು ಒಲವನ್ನು ಹೊಂದಿರುವವರು ಎನ್ನುವುದು ಇನ್ನೊಂದು ಮಹತ್ವದ ಅಂಶ. ಪಠ್ಯವನ್ನು ಅವಲಂಬಿಸದೆ, ಪುಸ್ತಕಗಳನ್ನು ಮುಚ್ಚಿ, ಗಮನದಿಂದ ಕೇಳಿ, ನಿಜವಾಗಿ ಅರ್ಥಮಾಡಿಕೊಳ್ಳುವಂತೆ ಇಲ್ಲಿ ಶಿಕ್ಷಕರು ನಮ್ಮನ್ನು ಪ್ರೋತ್ಸಾಹಿಸಿದರು. “ಇದು ಏಕೆ ಹೀಗೆ?”, “ಇದು ಸ್ವಯಂಸಿದ್ಧಾಂತವೇ ಅಥವಾ ಸಾಬೀತುಪಡಿಸಬಹುದಾದ ಹೇಳಿಕೆಯೇ?” ಎಂಬ ಪ್ರಶ್ನೆಗಳನ್ನು ಕೇಳುವಂತೆ ಇಲ್ಲಿ ಸದಾ ಪ್ರೇರೇಪಿಸಲಾಯಿತು. ಇದರಿಂದ ಗಣಿತದ ಹಲವು ವಿಷಯಗಳು ಜೀವಂತವಾಗಿಯೂ, ಅರ್ಥಪೂರ್ಣವಾಗಿಯೂ ಕಾಣಿಸಿದವು.
ಪ್ರತಿ ದಿನವೂ ಸುಮಾರು ಏಳು ಗಂಟೆಗಳ ಕಾಲ ಆಳವಾದ ಏಕಾಗ್ರತೆಯಿಂದ ನಮ್ಮನ್ನು ನಾವು ತೊಡಗಿಸಿಕೊಳ್ಳಬೇಕಿತ್ತು. ಪ್ರಾರಂಭದಲ್ಲಿ ಇದು ಕಠಿಣವೆನಿಸಿತು, ಆದರೆ ಕ್ರಮೇಣ ಆ ಗಂಭೀರತೆ ಉತ್ಸಾಹವಾಗಿ ಪರಿವರ್ತಿತವಾಯಿತು. ಎಷ್ಟರ ಮಟ್ಟಿಗೆ ಎಂದರೆ ವಿದ್ಯಾರ್ಥಿಗಳ ನಡುವೆ “WWASA?” — “What Will Ananth Sir Ask?” ಎಂಬುದು ಜನಪ್ರಿಯವಾಗಿ ಹೋಯಿತು. ಪ್ರತಿಯೊಂದು ಅಧಿವೇಶನಕ್ಕೂ ಮುನ್ನ ಇದು ನಮ್ಮಲ್ಲಿ ಕುತೂಹಲ ಮತ್ತು ನಿರೀಕ್ಷೆಯನ್ನು ಹುಟ್ಟಿಸುತ್ತಿತ್ತು. ಪ್ರತಿ ಒಂದು ಗಂಟೆಯ ಉಪನ್ಯಾಸದ ನಂತರ ವಿದ್ಯಾರ್ಥಿಗಳಲ್ಲೇ 20–30 ನಿಮಿಷಗಳ ಚರ್ಚೆ ನಡೆಯುತ್ತಿತ್ತು. ಇದು ಹೊಸ ಪರಿಕಲ್ಪನೆಗಳನ್ನು ಅನ್ವೇಷಿಸಲು ಹಾಗೆಯೇ ಪರಸ್ಪರರಿಂದ ಕಲಿಯಲು ಅನುವು ಮಾಡಿಕೊಟ್ಟಿತು. ಈ ನಿಟ್ಟಿನಲ್ಲಿ ಈ ಶಿಬಿರ ಇನ್ನೂ ಹೆಚ್ಚು ಅರ್ಥಪೂರ್ಣವೆನಿಸಿತು.
ನಾಲ್ಕನೇ ದಿನ ಸ್ವಯಂಮೌಲ್ಯಮಾಪನ ಅಧಿವೇಶನ ನಡೆಯಿತು. ಇದರ ವೈಶಿಷ್ಟ್ಯವೆಂದರೆ ನಮ್ಮ ಅಂಕಗಳ ಕುರಿತಾಗಿ ಯಾವ ಚರ್ಚೆಯೂ ನಡೆಯಲಿಲ್ಲ. ಬದಲಾಗಿ ಮಾರ್ಗದರ್ಶಕರು, “ನಿಮ್ಮ ತಪ್ಪಿನ ಬಗ್ಗೆ ನಿಮಗೆ ಅರಿವಿದೆಯೇ?”, “ಅದನ್ನು ಹೇಗೆ ಸರಿಪಡಿಸಬಹುದು ಎಂಬುದು ಗೊತ್ತೇ?” ಎಂದು ಮಾತ್ರ ಕೇಳಿದರು. ಅಂಕಗಳಿಗಿಂತ ಬೆಳವಣಿಗೆ ಮತ್ತು ಸ್ವಪರಿಶೀಲನೆಗೆ ಇಲ್ಲಿ ಹೆಚ್ಚಿನ ಮಹತ್ವ ನೀಡಲಾಯಿತು. ಇದು ಯಾವುದೇ ಅಂಕಕ್ಕಿಂತಲೂ ಮೌಲ್ಯಯುತವಾದ ಪಾಠ.
ಶೈಕ್ಷಣಿಕ ಅಂಶಗಳ ಹೊರತಾಗಿ, ಈ ಶಿಬಿರವು ನನಗೆ ಉತ್ತಮ ಸ್ನೇಹಿತರನ್ನೂ ಸಹ ನೀಡಿತು. ಮತ್ತೆ ಭೇಟಿಯಾಗದಿರಬಹುದೆಂಬ ಅರಿವಿನಿಂದ, ನಾವು ಮುಕ್ತವಾಗಿ ಮಾತನಾಡುತ್ತಿದ್ದೆವು. ಕೆಲವೊಮ್ಮೆ ವಿಚಿತ್ರ ಹಾಸ್ಯ ಉದಾಹರಣೆಗಳ ಮೂಲಕ ಕಠಿಣ ಪರಿಕಲ್ಪನೆಗಳನ್ನು ಅರ್ಥಮಾಡಿಕೊಳ್ಳುತ್ತಿದ್ದೆವು. ಇದರಿಂದ ಕಲಿಕೆಯ ವಾತಾವರಣ ಸಹಜವಾಗಿಯೂ , ಸಂತೋಷಕರವಾಗಿಯೂ ರೂಪುಗೊಂಡಿತು.
ವೈಯಕ್ತಿಕವಾಗಿ, ಈ ಶಿಬಿರವು ನನ್ನ ಚಿಂತನೆಯ ರೀತಿಯನ್ನೇ ಬದಲಿಸಿತು. ಸಮಸ್ಯೆಯೊಂದರೊಂದಿಗೆ ಮೌನವಾಗಿ ಕುಳಿತು, ಅಂತರ್ಗತವಾಗಿಸಿಕೊಂಡು, ಹೊರಗಿನ ಯಾವುದೇ ಮಾನ್ಯತೆಗಾಗಿ ಕಾಯದೆ ಅದನ್ನು ಶಾಂತವಾಗಿ ಪರಿಹರಿಸುವ ಹಾಗೂ ಅದರಿಂದ ದೊರೆಯುವ ಸಂತೋಷವನ್ನು ಅನುಭವಿಸುವ ಶಕ್ತಿಯನ್ನು ಇದು ನನಗೆ ಕಲಿಸಿತು.
ವಿಚಿತ್ರವೆಂದರೆ, ನಾನು ನನ್ನನ್ನು ಎಂದಿಗೂ ಗಣಿತದಲ್ಲಿ ಶಕ್ತಿಶಾಲಿ ವಿದ್ಯಾರ್ಥಿಯೆಂದು ಪರಿಗಣಿಸಿಲ್ಲ; ವಾಸ್ತವವಾಗಿ, ಶಾಲೆಯಲ್ಲಿ ನನಗೆ ಬಂದ ಕಡಿಮೆ ಅಂಕಗಳು ಈ ವಿಷಯದಲ್ಲಿಯೇ. ಆದರೆ 10ನೇ ತರಗತಿಯಲ್ಲಿ, ನನಗೆ ನಾನೇ ಸವಾಲೊಡ್ಡುಕೊಂಡು, ಗಣಿತವನ್ನು ನನ್ನೊಂದಿಗೆ ಇರುವ ಸ್ಪರ್ಧೆಯಾಗಿ ಪರಿವರ್ತಿಸಿದೆ. ಪರಿಹರಿಸಿದ ಪ್ರತಿಯೊಂದು ಸಮಸ್ಯೆಯೂ ವಿಜಯದ ಅನುಭವವನ್ನು ನೀಡಿತು.
ನನಗೆ ಗಣಿತ ಎಂದರೆ ಸದಾ ಒಂದು ಆಟದಂತೆಯೇ: ಒಂದು ಹಂತದಲ್ಲಿ ಸೋತರೆ, ಮತ್ತೆ ಪ್ರಯತ್ನಿಸಬಹುದು — ಮತ್ತು ಆ ಪ್ರಯಾಣದಲ್ಲಿ ಸಿಗುವ ಅನುಭವವೇ ಬೋನಸ್. MTTS ಶಿಬಿರವು ನಾನು ಈಗಿರುವ ಹಂತವನ್ನು ಗುರುತಿಸಲು ಸಹಾಯಮಾಡಿ, ಮುಂದಕ್ಕೆ ಸಾಗಲು ಸಾಧನಗಳನ್ನು ನೀಡಿತು. ಇನ್ನೂ ಮುಖ್ಯವಾಗಿ, ಗಣಿತವು ಕೇವಲ ಗುರಿಯನ್ನು ತಲುಪುವುದಷ್ಟೇ ಅಲ್ಲ, ಪ್ರಯಾಣವನ್ನು ಆನಂದಿಸುವುದೂ ಆಗಿದೆ ಎಂಬುದನ್ನು ಇದು ನೆನಪಿಸಿತು.
ಆಟಗಾರರಂತೆ, ನಾವು ಆಟವನ್ನು ಕೈ-ಬಿಡುವುದಿಲ್ಲ — ಕೇವಲ ಮರುಪ್ರಾರಂಭ ಮಾಡುತ್ತೇವೆ. ಈ ಶಿಬಿರದ ನಂತರ, ಗಣಿತವೆಂಬ ಸುಂದರ ಆಟವನ್ನು ಮುಂದುವರಿಸಲು ನಾನು ಎಂದಿಗಿಂತಲೂ ಹೆಚ್ಚು ಸಿದ್ಧಳಾಗಿದ್ದೇನೆ.
Chaya M. S. is a fourth-semester B.Sc. PCM student with a strong interest in science and mathematics currently studying in Sarada Vilas College, Mysuru. She views mathematics as a game that fosters growth and sharpens her thinking skills. Curious and eager to learn, she is currently focused on her studies and exploring her interests, while remaining open to the opportunities the future may bring.
If you find any mistakes or errors, please send the same to dep.math.svc@gmail.com

No comments:
Post a Comment